ನೀತಿಶಾಸ್ತ್ರ -
	ವೈಯಕ್ತಿಕವಾಗಿ ಹಾಗೂ ಸಮಾಜಕ್ಕೆ ಸಂಬಂಧಿಸಿದಂತೆ ಮನುಷ್ಯನ ನಡುವಳಿಕೆ ಹೇಗಿರಬೇಕು, ಅದರಲ್ಲಿ ಸರಿ ಯಾವುದು ತಪ್ಪಾವುದು ಎಂದು ತಿಳಿಸುವ ಶಾಸ್ತ್ರ (ಎತಿಕ್ಸ್). ಎತಿಕ್ಸ್ ಎಂಬ ಇಂಗ್ಲಿಷ್ ಪದಕ್ಕೆ ಮೂಲವಾದ ಎತಾಸ್ ಎಂಬ ಲ್ಯಾಟಿನ್ ಪದಕ್ಕೆ ನಡವಳಿಕೆ, ಗುಣ ಎಂದು ಅರ್ಥ. ನೀತಿಶಾಸ್ತ್ರಕ್ಕೆ ಮಾರಲ್ ಫಿಲಾಸಫಿ ಎಂಬ ಇನ್ನೊಂದು ಹೆಸರಿದೆ. ಅಲ್ಲಿನ ಮಾರಲ್ ಎಂಬ ಇಂಗ್ಲಿಷ್ ಪದಕ್ಕೆ ಮೂಲವಾದ ಮೋರೇಸ್ ಎಂಬ ಲ್ಯಾಟಿನ್ ಪದಕ್ಕೆ ಆಚರಣೆ, ರೂಢಿ, ಪದ್ಧತಿ ಎಂಬ ಅರ್ಥವಿದೆ.

	ಜೀವನಕ್ಕೆ ನೇರವಾಗಿ ಸಂಬಂಧಿಸಿದಂತಿರುವ ನೀತಿಶಾಸ್ತ್ರ ಕರ್ತವ್ಯಗಳೆಂದರೆ ಏನು, ಅವು ಯಾವುವು, ಅವು ಅನಿವಾರ್ಯವೆ, ಅವನ್ನು ಸಡಿಲಿಸಬಹುದೆ-ಮುಂತಾದ ಪ್ರಶ್ನೆಗಳನ್ನು ಸಮಗ್ರವಾಗಿ ಹಾಗೂ ಶಾಸ್ತ್ರೀಯವಾಗಿ ಚರ್ಚಿಸುತ್ತದೆ. ಇತರ ಶಾಸ್ತ್ರಗಳಂತೆ ಅದು ಇರುವ ವಿಷಯವನ್ನು ವಿವರಿಸುವ ಶಾಸ್ತ್ರವಲ್ಲ. ಅದು ಇಂಥ ನೈತಿಕ ವಿಷಯ ಹೀಗೆ ಇರಬೇಕು, ಹೀಗಿದ್ದರೆ ಸರಿಯಲ್ಲ ಎಂದು ಒತ್ತಿಹೇಳುತ್ತದೆ. ಅದು ಅನೇಕ ನೈತಿಕ ಮಾನಗಳನ್ನು ಮುಂದಿಟ್ಟು ಮಾನವನ ನಡವಳಿಕೆ ಅವಕ್ಕೆ ಅನುಸಾರವಾಗಿರಬೇಕೆಂದು ತಿಳಿಸುತ್ತದೆ. ಈ ದೃಷ್ಟಿಯಿಂದ ಅದು ಇತರ ಶಾಸ್ತ್ರಗಳಿಗಿಂತ ಭಿನ್ನ.

	ನೀತಿಶಾಸ್ತ್ರ ಕಲೆಯಲ್ಲ. ಏಕೆಂದರೆ ಕಲೆ ಸ್ವಾಭಾವಿಕವಾಗಿ ಪ್ರತಿಭೆಯಿಂದ ಬರುವಂಥಾದ್ದು. ಆದರೆ ನೀತಿ ಹಾಗಲ್ಲ. ಅದು ಪ್ರಯತ್ನಪೂರ್ವಕ ಗಳಿಸಿಕೊಳ್ಳಬೇಕಾದ್ದು. ಮನಃಸ್ಥೈರ್ಯ, ಇಂದ್ರಿಯನಿಗ್ರಹ ಮುಂತಾದವು ನೀತಿವಂತರಾಗಲು ಸಹಾಯಮಾಡುತ್ತದೆ.

	ನೀತಿಶಾಸ್ತ್ರ ತತ್ತ್ವಶಾಸ್ತ್ರದ ಒಂದು ಭಾಗ. ವಿಷಯ ವ್ಯಾಪ್ತಿ ಹಾಗೂ ವ್ಯಾಸಂಗಾನುಕೂಲಗಳ ದೃಷ್ಟಿಯಿಂದ ತತ್ತ್ವಶಾಸ್ತ್ರವನ್ನು ಸ್ಥಿತಿಶಾಸ್ತ್ರ (ಆಂಟಾಲಜೀ) ಜ್ಞಾನವಿಚಾರ (ಇಪಿಸ್ಟಮಾಲಜೀ) ಮತ್ತು ಸಾಧನಾವಿಚಾರ (ಆ್ಯಕ್ಸೀಯಾಲಜೀ) ಎಂದು ಮೂರು ಭಾಗ ಮಾಡುವರು. ಸಾಧನವಿಚಾರವನ್ನು ಪುನಃ ಮೂರು ಭಾಗಗಳನ್ನಾಗಿ ಮಾಡುವರು: ತರ್ಕಶಾಸ್ತ್ರ (ಲಾಜಿಕ್), ಸೌಂದರ್ಯಶಾಸ್ತ್ರ (ಈಸ್ತೆಟಿಕ್ಸ್) ಮತ್ತು ನೀತಿಶಾಸ್ತ್ರ (ಎತಿಕ್ಸ್) ಎಂದು. ಹೀಗೆ ನೀತಿಶಾಸ್ತ್ರ ತತ್ತ್ವಶಾಸ್ತ್ರದ ಒಂದು ಭಾಗವಾದುದರಿಂದ ಅದರ ಮಾರ್ಗವೂ ತಾತ್ತ್ವಿಕವಾದುದೆಂದು ಕೆಲವು ನೀತಿಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಮತ್ತೆ ಕೆಲವರು ಅದರಲ್ಲಿ ವೈಜ್ಞಾನಿಕ ಮಾರ್ಗವೂ ಉಂಟೆಂದು ವಾದಿಸುತ್ತಾರೆ. ಇನ್ನೂ ಕೆಲವರು ಈ ಮೇಲಿನ ಎರಡೂ ಸಂಗತಿಗಳನ್ನು ಅಲ್ಲಗಳೆದು, ನೀತಿಶಾಸ್ತ್ರದಲ್ಲಿರುವ ಮಾರ್ಗಗಳು ತಾತ್ತ್ವಿಕ ಮತ್ತು ವೈಜ್ಞಾನಿಕ ಮಾರ್ಗಗಳ ಸಮನ್ವಯವೆಂದು ವಾದಿಸುತ್ತಾರೆ.

	ನೀತಿಶಾಸ್ತ್ರದ ಸಮಸ್ಯೆಗಳು ವಿಪುಲ. ಮೆಕೆಂಜಿ ಎಂಬ ನೀತಿಶಾಸ್ತ್ರಜ್ಞ ನೀತಿಶಾಸ್ತ್ರದ ಸಮಸ್ಯೆಗಳನ್ನು ಹೀಗೆ ವಿಂಗಡಿಸುತ್ತಾನೆ: 1. ನೈತಿಕ ಪ್ರಜ್ಞೆಯ ಮಾನಸಿಕ ಸಮಸ್ಯೆಗಳು, 2. ನೀತಿಶಾಸ್ತ್ರದ ಸಾಮಾಜಿಕ ಸಮಸ್ಯೆಗಳು, 3. ನೀತಿಶಾಸ್ತ್ರದಲ್ಲಿ `ಮಾನದ ಸಮಸ್ಯೆ ಮತ್ತು 4. ನಿತ್ಯಜೀವನದಲ್ಲಿ ಈ ನೀತಿಯ ಮಾನಗಳನ್ನು ಅಳವಡಿಸುವುದರಲ್ಲಿನ ಸಾಧ್ಯತೆ, ಅಸಾಧ್ಯತೆಗಳ ಸಮಸ್ಯೆಗಳು, 5. ನೀತಿಶಾಸ್ತ್ರಕ್ಕೂ ಧರ್ಮ, ಅಧ್ಯಾತ್ಮ ಶಾಸ್ತ್ರ ಮುಂತಾದವುಕ್ಕೂ ಇರುವ ಸಂಬಂಧ ಇತ್ಯಾದಿ.

	ನೀತಿಶಾಸ್ತ್ರ ಮತ್ತು ಧರ್ಮಗಳ ನಡುವೆ ಅವಶ್ಯಕವಾದ ಹಾಗೂ ಬೇರ್ಪಡಿಸಲಾಗದ ಸಂಬಂಧವಿದೆ ಎಂದು ಪಾಶ್ಚಾತ್ಯದಲ್ಲಿ ಮ್ಯಾತ್ಯೂ ಆರ್ನಲ್ಡ್, ಬ್ರಾಡ್ಲೆ ಮುಂತಾದವರು ಅಭಿಪ್ರಾಯಪಡುತ್ತಾರೆ. ನೈತಿಕಶುದ್ಧಿ ಇಲ್ಲದವ ಧರ್ಮಾವಲಂಬಿಯಾಗಲು ಅರ್ಹನಲ್ಲವೆಂದೂ ನೀತಿ ತನ್ನ ಸಾರ್ಥಕ್ಯವನ್ನು ಪಡೆಯುವುದು ಅದು ಧರ್ಮದೊಡನೆ ಸೇರುವಾಗಲೇ ಹೊರತು, ತಂತಾನೇ ಅದು ಯವ ಲೋಕೋದ್ಧಾರವನ್ನೂ ಮಾಡುವುದು ಸುಲಭಸಾಧ್ಯವಲ್ಲವೆಂದೂ ಅವರ ಅಭಿಪ್ರಾಯ. ಈ ವಾದ ಪಾಶ್ಚಾತ್ಯರಿಗಿಂತ ಭಾರತೀಯರಲ್ಲಿ ಬಹಳ ಪ್ರಬಲವಾಗಿದೆ. ಭಾರತದಲ್ಲಿ, ಧರ್ಮ ಮತ್ತು ನೀತಿಗಳ ನಡುವೆ ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ನೀತಿ ಧರ್ಮಕ್ಕೆ ಪೂರಕವಾಗಿರಬೇಕೆಂದೂ ನೀತಿವಂತನಲ್ಲದ ಧರ್ಮಾವಲಂಬಿ ಶುದ್ಧ ಮೂರ್ಖನೆಂದೂ ಅವನನ್ನು ಧರ್ಮವಂತನೆಂದು ಕರೆಯುವುದು ಅಪಮಾನಕರವೆಂದೂ ನೀತಿಯಿಲ್ಲದ ಧರ್ಮ ಶುಷ್ಕವೆಂದೂ ತ್ಯಾಜ್ಯವೆಂದೂ ಭಾರತೀಯರು ತಿಳಿಯುತ್ತಾರೆ.

	ಪಾಶ್ಚಾತ್ಯರಲ್ಲಿ ನೀಚೆ, ಕಾಂಟ್ ಮುಂತಾದವರು ಮೇಲೆ ಹೇಳಿದ ವಾದವನ್ನು ತಿಳಿಸುವುದಿಲ್ಲ. ನೀತಿ ಸ್ವತಂತ್ರವಾದುದೆಂದೂ ಅದು ಧರ್ಮದೊಡನೆ ಯಾವ ಸಂಬಂಧವನ್ನೂ ಹೊಂದಿರಬೇಕಿಲ್ಲವೆಂದೂ ನೀತಿವಂತ ಧರ್ಮಾವಲಂಬಿಯಾಗಿರಬೇಕಾಗಿಲ್ಲವೆಂದೂ ನೀಚೆ ಅಭಿಪ್ರಾಯಪಡುತ್ತಾನೆ. ಕಾಂಟ್ ಇನ್ನೂ ಮುಂದೆ ಹೋಗಿ ಮೊದಲಿದ್ದುದು ನೀತಿ ಮಾತ್ರವೆಂದೂ ಧರ್ಮ ಅನಂತರ ಹುಟ್ಟಿ ನೀತಿಗೆ ಸೇರಿತೆಂದೂ ಅಭಿಪ್ರಾಯಪಡುತ್ತಾನೆ.

	ಇತ್ತೀಚಿನವರಂತೂ ಇದೇ ಅಭಿಪ್ರಾಯವನ್ನು ಹಾಡಿ ಹೊಗಳುತ್ತಾರೆ. ಮಾನವ ನೀತಿವಂತನಾಗಿದ್ದು ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂಬುದನ್ನು ತಿಳಿದು ಜೀವನ ಸಾಗಿಸಿ ಸಮಾಜದಿಂದ ಪಡೆದದ್ದರಲ್ಲಿ ಆದಷ್ಟನ್ನು ಹಿಂತಿರುಗಿಸಿ ಕಣ್ಣು ಮುಚ್ಚಿದರೆ ಸಾಕೆಂದೂ ಧರ್ಮ, ಆಚರಣೆ ಮುಂತಾದವು ಕೇವಲ ಕಪಟವೆಂದೂ ಅಭಿಪ್ರಾಯಪಡುತ್ತಾರೆ.

	ಇತ್ತೀಚಿನವರ ಈ ಅಭಿಪ್ರಾಯವನ್ನು ಎಲ್ಲರೂ ಒಪ್ಪುವುದಿಲ್ಲ. ಅನುಭಾವಿಗಳಂತೂ ಈ ಅಭಿಪ್ರಾಯವನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ನೀತಿಗೆ ಒಂದು ಗುರಿ ಇರಬೇಕೆಂದೂ ಆ ಗುರಿಯೇ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವುದೆಂದೂ ನೀತವಂತನಾಗದೆ ಆತ್ಮಸಾಕ್ಷಾತ್ಕಾರ ಅಸಾಧ್ಯವೆಂದೂ ಅವರು ವಾದಿಸುತ್ತಾರೆ. ನೀತಿಗೆ ಒಂದು ಗುರಿಯಿಲ್ಲದಿದ್ದರೆ ನಾನೇಕೆ ಇತರರಿಗೆ ಸಹಾಯ ಮಾಡಬೇಕು, ಒಳ್ಳೆಯದನ್ನು ಮಾಡಬೇಕು ಎಂದು ಸ್ವಾಮಿ ವಿವೇಕಾನಂದರು ಪ್ರಶ್ನಿಸಿ, ಧರ್ಮ ಮತ್ತು ನೀತಿಗಳ ನಡುವೆ ಅವಶ್ಯವಾದ ಹಾಗೂ ಅನಿವಾರ್ಯವಾದ ಸಂಬಂಧ ಇರಬೇಕೆಂದೂ ಈ ಸಂಬಂಧದಿಂದ ಮಾನವತ್ವವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದೂ ಸಾರಿದ್ದಾರೆ.

	ನೀತಿಶಾಸ್ತ್ರಕ್ಕೂ ಅಧ್ಯಾತ್ಮಶಾಸ್ತ್ರಕ್ಕೂ ನಿಕಟಸಂಬಂಧವಿದೆ. ಆತ್ಮ ಎಂದರೇನು, ಅದಕ್ಕೆ ಪುನರ್ಜನ್ಮ ಇದೆಯೇ, ಅದು ಅಮರವೇ, ನಾಶವಾಗುವಂಥಾದ್ದೇ, ದೇವರಿದ್ದಾನೆಯೇ-ಮುಂತಾದ ಅಧ್ಯಾತ್ಮಶಾಸ್ತ್ರದ ಪ್ರಶ್ನೆಗಳೂ ನೀತಿಶಾಸ್ತ್ರದಲ್ಲಿ ಕಾಣಸಿಗುತ್ತವೆ. ಮಾನವನ ಇಚ್ಛಾಬಲ ಸ್ವತಂತ್ರವಾದುದೆ ಮೊದಲೇ ನಿರ್ಣೀತವಾದುದೆ ಎಂಬ ಅಧ್ಯಾತ್ಮಶಾಸ್ತ್ರದ ಈ ಪ್ರಶ್ನೆಯಂತೂ ನೀತಿಶಾಸ್ತ್ರದ ಜೀವಾಳವಾಗಿದೆ. ಆದುದರಿಂದ ನೀತಿಶಾಸ್ತ್ರಕ್ಕೂ ಅಧ್ಯಾತ್ಮಶಾಸ್ತ್ರಕ್ಕೂ ನಿಕಟಸಂಬಂಧವಿದೆ ಎಂದು ತಿಳಿಯಬಹುದು.

	ಮಾನವನಲ್ಲಿ ನೈತಿಕ ಪ್ರಜ್ಞೆ ಹೇಗೆ ಉದಯವಾಯಿತು ಎಂಬುದು ವಿವಾದಾಸ್ಪದವಾದ ವಿಷಯ. ಕೆಲವು ನೀತಿಶಾಸ್ತ್ರಜ್ಞರ ಪ್ರಕಾರ ನೈತಿಕ ಪ್ರಜ್ಞೆಯ ಹುಟ್ಟು ಮೊದಲಾದುದು ಮಾನವ ಬಣಗಳಲ್ಲಿ, ಬುಡಕಟ್ಟುಗಳಲ್ಲಿ. ಅದರ ಹುಟ್ಟು ಹೇಗೇ ಇರಲಿ, ನೈತಿಕ ಪ್ರಜ್ಞೆಯ ಬೆಳೆವಣಿಗೆಯಲ್ಲಿ ಮುಖ್ಯವಾಗಿ ಮೂರು ಹಂತಗಳನ್ನು ನಿರೂಪಿಸಲಾಗಿದೆ: 1. ಹುಟ್ಟುಗುಣ ಅಥವಾ ಸ್ವಾಭಾವಿಕ ಹಂತ, 2. ಸಂಪ್ರದಾಯ, 3. ಧರ್ಮಾಧರ್ಮ ವಿಚಾರ ಶಕ್ತಿಯ ಆತ್ಮಸಾಕ್ಷಿ. ಮಾನವ ಸ್ವಭಾವತಃ ದುಷ್ಟ. ಆದಿಮಾನವನಲ್ಲಿ ಪ್ರಾಣಿಸಹಜವಾದ ನಡವಳಿಕೆಯನ್ನೇ ಕಾಣುತ್ತೇವೆ. ಸುಖದುಃಖ ಹಸಿವು ತೃಷೆ, ಕಾಮ ಕ್ಷೇಮ, ಎಲ್ಲ ವಿಚಾರಗಳಲ್ಲೂ ಅವನು ಪಶುವಿನಂತೆ ನಡೆದುಕೊಳ್ಳುತ್ತಿದ್ದ. ಕಾರ್ಯಾಕಾರ್ಯ ವಿವೇಕ ಅವನಿಗಿರಲಿಲ್ಲ. ಇದು ಮೊದಲ ಹಂತ.

	ಸಂಪ್ರದಾಯದ ಹಂತದಲ್ಲಿ ನೈತಿಕ ಪ್ರಜ್ಞೆಯನ್ನು ಸ್ಪಷ್ಟವಾಗಿ ಕಾಣಬಹುದು. ಮಾನವಸಮಾಜದ ಆದಿಯಲ್ಲಿ ಪ್ರತಿಯೊಂದು ಗುಂಪಿಗೂ ಒಬ್ಬ ಯಜಮಾನ ಇರುತ್ತಿದ್ದ. ಧರ್ಮ, ಅಧರ್ಮ, ಸತ್ಯ, ಅಸತ್ಯ ಮುಂತಾದ ವಿಷಯಗಳಲ್ಲಿ ಅವನ ಅಭಿಪ್ರಾಯವೇ ನಡೆಯುತ್ತಿತ್ತು. ಅವನೂ ಇತರ ಜನರೂ ಸೇರಿ ಇಂಥ ಕೆಲಸಗಳನ್ನು ಮಾಡಬಾರದು, ಅವನ್ನು ಮಾಡಿದರೆ ಮಾಡಿದವರನ್ನು ಶಿಕ್ಷಿಸಬೇಕು (ಟಾಬೂ) ಎಂದು ಒಪ್ಪಂದ ಮಾಡಿಕೊಂಡು ಸಮಾಜದ ಹಿತವನ್ನು ರಕ್ಷಿಸುತ್ತಿದ್ದರು. ಇದು ಸಂಪ್ರದಾಯದ ಹಂತ.

	ಧರ್ಮಾಧರ್ಮವಿಚಾರದ ಹಂತ ಬಹಳ ಸ್ಪಷ್ಟವಾಗಿ ನೈತಿಕ ಪ್ರಜ್ಞೆಯ ಬೆಳವಣಿಗೆಯನ್ನು ವಿವರಿಸುತ್ತ ಈ ಹಂತದ ಪ್ರಕಾರ ಮಾನವ ನೀತಿವಂತ ಏಕೆ ಆಗಿದ್ದಾನೆಂದರೆ ಅವನ ವಿಚಾರಶೀಲತೆಯಿಂದ. ಆತ ಪ್ರಾಣಿಗಳಲ್ಲೆಲ್ಲ ಶ್ರೇಷ್ಠನಾದವ. ಅವನ ಈ ಶ್ರೇಷ್ಠತೆಗೆ ಕಾರಣ ಅವನ ಮೇಧಾಶಕ್ತಿ, ವಿಚಾರಶಕ್ತಿ. ಈ ವಿಚಾರಶಕ್ತಿಯಿಂದಲೇ ಆತ ಯಾವುದು ಧರ್ಮ, ಯಾವುದು ಅಧರ್ಮ ಎಂಬುದನ್ನು ನಿಷ್ಕರ್ಷಿಸಲು ಸಮರ್ಥನಾದ. ನೈತಿಕಪ್ರಜ್ಞೆ ಬೆಳೆಯುವುದು ಮಾನವನ ವಿಚಾರಶೀಲತೆಯಿಂದಲೇ ಹೊರತು ಆತನ ಸಂಪ್ರದಾಯ ಅಥವಾ ಹುಟ್ಟು ಗುಣಗಳಿಂದಲ್ಲ ಎಂಬುದು ಈ ಹಂತದ ತಾತ್ಪರ್ಯ.

	ನೀತಿಶಾಸ್ತ್ರದಲ್ಲಿ ತೀರ್ಮಾನ ಎಂಬುದಕ್ಕೆ ವಿಶೇಷ ಅರ್ಥವಿದೆ. ಒಂದು ವಸ್ತು ಹೇಗಿದೆಯೋ ಹಾಗೆಯೇ ತೀರ್ಮಾನವನ್ನು ಪಡೆಯುವುದು ನೀತಿಶಾಸ್ತ್ರದಲ್ಲಿ ಬಳಕೆಯಲ್ಲಿಲ್ಲ. ಆ ವಸ್ತು ಹೀಗಿರಬೇಕು ಎಂದು ಮೊದಲು ನಿಶ್ಚಯಿಸಿಕೊಂಡು ಪ್ರಸ್ತುತ ವಸ್ತುವನ್ನು ಅದಕ್ಕೆ ಹೋಲಿಸಿ ಆ ಮೂಲಕ ಆ ವಸ್ತುವಿನ ಬಗ್ಗೆ ತೀರ್ಮಾನವನ್ನು ಪಡೆಯುವುದು ವಾಡಿಕೆ. ಈ ಅಂಶದಲ್ಲಿ ನೈತಿಕ ತೀರ್ಮಾನ ಇತರ ಸಾಮಾನ್ಯ ತೀರ್ಮಾನಗಳಿಗಿಂತ ಭಿನ್ನ.

	ನೈತಿಕ ತೀರ್ಮಾನದ ವಿಷಯ ಸ್ವಯಂ ಇಚ್ಛೆಪಟ್ಟ ಕ್ರಿಯೆ. ಯಾವ ಕ್ರಿಯೆಯನ್ನಾಗಲೀ ಮಾನವ ಬಯಸದಿದ್ದಲ್ಲಿ ಅದಕ್ಕೆ ನೈತಿಕ ಮೌಲ್ಯ ಬರುವುದಿಲ್ಲ. ಉದಾಹರಣೆಗೆ, ಪ್ರಾಣಿಗಳ ಕೆಲಸಕಾರ್ಯಗಳನ್ನು ನೈತಿಕ ಅಥವಾ ಅನೈತಿಕವೆಂದು ಪರಿಗಣಿಸುವುದಿಲ್ಲ. ಏಕೆಂದರೆ ಅವು ಆ ಕೆಲಸಕಾರ್ಯಗಳನ್ನು ಸ್ವಇಚ್ಛಿಸಲಿಲ್ಲ.

	ನೀತಿಶಾಸ್ತ್ರದಲ್ಲಿ ನೈತಿಕ ತೀರ್ಮಾನಕ್ಕೆ ಸಂಬಂಧಿಸಿದಂತೆ ಪ್ರೇರಣೆ (ಮೋಟೀವ್) ಮತ್ತು ಉದ್ದೇಶ (ಇಂಟೆನ್‍ಷನ್)-ಇವುಗಳ ನಡುವೆ ಭೇದವನ್ನು ಮಾಡುತ್ತಾರೆ. ಯಾವುದು ನಮ್ಮನ್ನು ಕಾರ್ಯದ ಕಡೆಗೆ ಚಲಿಸುವಂತೆ ಮಾಡುತ್ತದೆಯೋ ಅವೇ ಪ್ರೇರಣೆ. ಕಾರ್ಯದ ಬಗ್ಗೆ ನಮಗಿರುವ ಆಶಯವೇ ಉದ್ದೇಶ.

	ಹಾಗೆಯೇ ನೀತಿಶಾಸ್ತ್ರದಲ್ಲಿ ಶೀಲ (ಕ್ಯಾರೆಕ್ಟರ್) ಮತ್ತು ನಡತೆಗಳ (ಕಾಂಡಕ್ಟ್) ನಡುವೆ ವ್ಯತ್ಯಾಸವನ್ನು ಮಾಡುತ್ತಾರೆ. ಶೀಲ ಆಂತರಿಕವಾದುದು. ಅಮೂರ್ತವಾದುದು. ಮಾನಸಿಕವಾದುದು. ನಡತೆ ಹೀಗಲ್ಲ. ಅದು ಬಾಹ್ಯವಾದ ಚಟುವಟಿಕೆಗಳ ರೂಪದಲ್ಲಿ ಹೊರತೋರುವಂಥದು. ಅದರ ಮೂಲಕ ವ್ಯಕ್ತಿಯ ಶೀಲ ಪ್ರಕಟವಾಗುತ್ತದೆ. 

	ಧರ್ಮ, ಶ್ರೇಯ ಮತ್ತು ಮೌಲ್ಯಗಳು ನೀತಿಶಾಸ್ತ್ರದ ಮೂರು ಆಧಾರಸ್ತಂಭಗಳು. ಉಳಿದ ಅನೇಕ ಭಾವಗಳು ಇದನ್ನು ಅವಲಂಬಿಸಿ ನಿಂತಿವೆ.

	ಧರ್ಮ ಎಂಬುದಕ್ಕೆ ಇಂಗ್ಲಿಷಿನಲ್ಲಿ ರೈಚ್ಯುಅಸ್‍ನೆಸ್ ಎನ್ನುತ್ತಾರೆ. ಆ ಪದಕ್ಕೆ ಲ್ಯಾಟಿನ್ ಮೂಲವಾದ ರೆಕ್ಟಸ್ ಎಂಬ ಪದಕ್ಕೆ ನಿಯಮಗಳಿಗೆ ಅನುಸಾರವಾಗಿರುವುದು ಎಂದು ಅರ್ಥ. ಯಾವುದು ನೈತಿಕ ನಿಯಮಗಳಿಗನುಸಾರವಾಗಿರುತ್ತದೋ ಅದೇ ಧರ್ಮ. ಉದಾ: ಸುಳ್ಳು ಹೇಳಬಾರದು ಎಂಬುದು ಒಂದು ನೈತಿಕ ನಿಯಮ. ಈ ನಿಯಮವನ್ನು ಯಾರು ಪಾಲಿಸುತ್ತಾರೋ ಅವನೇ ನೀತಿವಂತ.

	ಶ್ರೇಯ (ಗುಡ್‍ನೆಸ್) ಎಂಬುದನ್ನು ಅಷ್ಟು ಸುಲಭವಾಗಿ, ನೇರವಾಗಿ ವಿವರಿಸಲಾಗುವುದಿಲ್ಲ. ಇತರ ನೈತಿಕ ಭಾವಗಳ ಮೂಲಕ ಮಾತ್ರ ಅದರ ಅರ್ಥ ಹೇಳುವುದು ಸಾಧ್ಯ. ಸ್ಥೂಲವಾಗಿ ಹೇಳುವುದಾದರೆ ಯಾವುದು ನಿಯಮಗಳಿಗನುಸಾರವಾಗಿದೆಯೋ, ಯಾವುದು ಮೌಲ್ಯ ಉಳ್ಳದ್ದೋ ಅದೇ ಶ್ರೇಯ.

	ಮೌಲ್ಯವೆಂದರೆ (ವ್ಯಾಲ್ಯು) ಇಷ್ಟಾರ್ಥ, ಎಂದರೆ ಇಚ್ಛೆಪಟ್ಟದ್ದು ಎಂದು ಅರ್ಥ. ಈ ಮೌಲ್ಯ ವ್ಯಕ್ತಿನಿಷ್ಠವೋ ಎಂಬುದು ನೀತಿಶಾಸ್ತ್ರದಲ್ಲಿ ಇದುವರೆವಿಗೂ ಇನ್ನೂ ಬಗೆಹರಿಯದ ಪ್ರಶ್ನೆಯಾಗಿದೆ.

	ಶ್ರೇಯ ಎಂದರೆ ಏನು ಎಂಬುದರ ಬಗ್ಗೆ ಅನೇಕ ವಾದಗಳಿವೆ. ಇವುಗಳಲ್ಲಿ ಮುಖ್ಯವಾದವು ಈ ರೀತಿ ಇವೆ: 1. ಸುಖವಾದ. 2. ಉಪಯೋಗವಾದ, 3. ಆತ್ಮಸಾಕ್ಷಿವಾದ, 4. ವಿಚಾರವಾದ, 5. ಧ್ಯೇಯವಾದ.

	ಸುಖವಾದ ಬಹಳ ಒರಟಾದ್ದು. ಈ ವಾದದ ಪ್ರಕಾರ ಯಾವುದು ಮಾನವನಿಗೆ ಸುಖವನ್ನು ಕೊಡುತ್ತದೋ ಅದೇ ಶ್ರೇಯ. ಭಾರತದಲ್ಲಿ ಈ ವಾದವನ್ನು ಎತ್ತಿಹಿಡಿವರು ಚಾರ್ವಾಕರು. ಸಾಲ ಮಾಡಿಯಾದರೂ ತುಪ್ಪವನ್ನು ತಿನ್ನು ಎಂಬುದು ಅವರ ಮೂಲಮಂತ್ರ.

	ಉಪಯೋಗವಾದಕ್ಕೆ ಮೊದಲು ಸ್ಫೂರ್ತಿ ಕೊಟ್ಟವ ಬೆಂತಮ್. ಅದನ್ನು ಪರಿಣಾಮಕಾರಿಯಾಗಿ ಬೋಧಿಸಿದವ ಜೆ.ಎಸ್.ಮಿಲ್. ಯಾವುದು ಹೆಚ್ಚು ಜನರಿಗೆ ಸುಖವನ್ನು, ಸಂತೋಷವನ್ನು ಕೊಡುತ್ತದೋ ಅದೇ ನಿಜವಾದ ಶ್ರೇಯ ಎಂಬುದು ಈ ವಾದದ ತಿರುಳು.

	ಯಾವುದು ಆತ್ಮಸಾಕ್ಷಿಯನ್ನು ಮೀರಿಹೋಗುವುದಿಲ್ಲವೋ ಅದೇ ಶ್ರೇಯ ಎಂಬುದು ಬಟ್ಲರ್ ಮಂಡಿಸಿದ ಆತ್ಮಸಾಕ್ಷಿವಾದ.

	ಯಾವುದು ವಿಚಾರದ ಒರೆಗಲ್ಲಿಗೆ ನಿಲ್ಲುವುದೋ ಯಾವುದು ಬುದ್ಧಿಗೆ ಅನುಸಾರವಾಗಿರುವುದೋ ಅದೇ ಶ್ರೇಯ ಎಂಬುದು ಕಾಂಟನ ವಿಚಾರವಾದದ ತಿರುಳು. ಇವನು ಶ್ರೇಯವನ್ನು ಕ್ಯಾಟಗಾರಿಕಲ್ ಇಂಪರೆಟಿವ್ (ಬೇಷರತ್ ಆಜ್ಞೆ) ಎಂದು ಕರೆಯುತ್ತಾನೆ.

	ಯಾವುದು ಆತ್ಮಸಾಕ್ಷಾತ್ಕಾರಕ್ಕೆ ಸಹಾಯಕವೋ ಪೂರಕವೋ ಅದೇ ಶ್ರೇಯ ಎಂಬುದು ಗ್ರೀನ್ ಮತ್ತು ಬ್ರಾಡ್ಲೆ ಇವರ ಧ್ಯೇಯವಾದದ ತಿರುಳು.

	ಒಳ್ಳೆಯ ಹಾಗೂ ಕೆಟ್ಟ ಕಾರ್ಯಗಳನ್ನು ಮಾಡುವಲ್ಲಿ ಆತ್ಮಕ್ಕೆ ಸ್ವಾತಂತ್ರ್ಯ ಇದೆಯೇ ಎಂಬುದು ಬಹಳ ಗಹನವಾದ ಪ್ರಶ್ನೆ. ಹಾಗೆಯೇ ಆತ್ಮ ಅವಿನಾಶಿಯಾದುದೋ ಎಂಬುದು ಕೂಡ ಇನ್ನೊಂದು ಬಹುಮುಖ್ಯವಾದ ಪ್ರಶ್ನೆ. ಯಾವ ಕಾರ್ಯವನ್ನು ಮಾಡಲೂ ಆತ್ಮಕ್ಕೆ ಸ್ವಾತಂತ್ರ್ಯವಿದೆ ಎಂದು ಕೆಲವರೂ ಅಂಥ ಸ್ವಾತಂತ್ರ್ಯ ಇಲ್ಲ ಎಂದು ಕೆಲವರೂ ವಾದಿಸಿರುತ್ತಾರೆ.

	ಹಾಗೆಯೇ ಆತ್ಮ ಅವಿನಾಶಿ ಎಂದು ಹೇಳುವಲ್ಲೂ ಎರಡು ಅಭಿಮತಗಳಿವೆ. ದ್ರವ್ಯ ಹಾಗೂ ಶಕ್ತಿಗಳು ಅವಿನಾಶಿ ಎನ್ನುವ ವಿಜ್ಞಾನ ಸತ್ಯವನ್ನಾಧರಿಸಿ ಈ ಆತ್ಮವೂ ಅಮರ, ಅವಿನಾಶಿ ಎಂದು ವಾದಿಸುವವರಿದ್ದಾರೆ. ಈ ಭೌತಿಕ ಪ್ರಪಂಚದಲ್ಲಿ ನಾಶ ಎಂಬುದಿಲ್ಲ. ಭೌತ ಪ್ರಪಂಚದಲ್ಲಿ ಒಂದು ವಸ್ತು ಇನ್ನೊಂದು ವಸ್ತುವಿನ ರೂಪವಾಗಿ ಬದಲಾಗುತ್ತದೆಯೇ ಹೊರತು ಅದು ನಾಶವಾಗದು. ಮಾನವ ಸತ್ತ ಬಳಿಕ ಆತನ ದೇಹ ಇನ್ನೊಂದು ರೂಪದಲ್ಲಿ ಉಳಿಯುತ್ತದೆ. ಆತ್ಮ ಅಭೌತವಾದುದರಿಂದ ಅದಕ್ಕೆ ನಾಶವೇ ಇಲ್ಲ ಎಂಬುದು ಅವರ ವಾದ.

	ಮಾನವ ಒಳ್ಳೆಯ ಕಾರ್ಯಗಳನ್ನು ಮಾಡಿದಾಗ ಅದರ ಫಲ ತನ್ನ ಮರಣದ ಅನಂತರವೂ ನಿಲ್ಲಬೇಕೆಂದು ಇಚ್ಫೆಪಡುತ್ತಾನೆ. ಈ ಇಚ್ಛೆಯನ್ನು ನಾವು ಮಾನಸಿಕವಾಗಿ ಒಪ್ಪಿಕೊಂಡರೆ ಆತ್ಮಕ್ಕೆ ಅಮರತ್ವವಿದೆಯೆಂದು ಒಪ್ಪಬೇಕಾಗುತ್ತದೆ.

	ಅಂತೂ ಆತ್ಮ ಸ್ವತಂತ್ರವಾದುದೇ ಎಂಬುದು ನೀತಿಶಾಸ್ತ್ರದ ಮೂಲ ಪ್ರಶ್ನೆಯಾಗಿದೆ.

	ಸದ್ವರ್ತನೆಯ ಲಕ್ಷಣಗಳು (ಕಾರ್ಡಿನಲ್ ವಚ್ರ್ಯೂಸ್) ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬೇರೆಬೇರೆಯಾಗುತ್ತದೆ. ಪ್ಲೇಟೊ ತನ್ನ ರಿಪಬ್ಲಿಕ್ ಗ್ರಂಥದಲ್ಲಿ ಧೈರ್ಯ, ಬುದ್ಧಿವಂತಿಕೆ, ಇಂದ್ರಿಯನಿಗ್ರಹ ಮತ್ತು ನ್ಯಾಯ-ಇವನ್ನು ಸದ್ವರ್ತನೆಯ ಪ್ರಮುಖ ಗುಣಗಳು ಎನ್ನುತ್ತಾನೆ. ಹಾಗೆಯೇ ಕ್ರೈಸ್ತಧರ್ಮ ಜನಸಾಮಾನ್ಯರಿಗೆ ಹಾಗೂ ಸಂನ್ಯಾಸಿಗಳಿಗೆ ಎರಡು ಭಿನ್ನ ಶೀಲಸಂಹಿತೆಗಳನ್ನು ಕೊಟ್ಟಿದೆ. ಕಾರ್ಡಿನಲ್ ವಚ್ರ್ಯೂಸ್‍ಗಳನ್ನು ಹೇಳಲಾಗಿದೆ. ಜನಸಾಮಾನ್ಯರಲ್ಲಿ ಇರಬೇಕೆಂದು ಅದು ಹೇಳಿರುವ ಮುಖ್ಯ ಗುಣಗಳು ಇವು: ನಂಬಿಕೆ ಅಥವಾ ಶ್ರದ್ಧೆ, ಆಶಾವಾದ ಮತ್ತು ಶೀಲ, ಸಂನ್ಯಾಸಿಗಳಲ್ಲಿರಬೇಕಾದ ಗುಣಗಳು ಇವು: ವಿಧೇಯತೆ, ಬಡತನ ಮತ್ತು ಶೌಚಗುಣ. ಉಪನಿಷತ್ತಿನಲ್ಲಿ ದಾನ, ಧರ್ಮ ಮತ್ತು ದಯಾ-ಇವನ್ನು ಮುಖ್ಯ ಗುಣಗಳೆಂದು ಹೇಳಿದೆ. ಬೌದ್ಧ, ಜೈನ ಹಾಗೂ ಯೋಗದರ್ಶನಗಳಲ್ಲಿ ಅಹಿಂಸಾ, ಸತ್ಯ, ಬ್ರಹ್ಮಚರ್ಯ, ಅಸ್ತೇಯ ಮತ್ತು ಅಪರಿಗ್ರಹ-ಇವನ್ನು ಮುಖ್ಯ ಗುಣಗಳೆಂದು ಹೇಳಲಾಗಿದೆ. ಧರ್ಮಶಾಸ್ತ್ರಗಳಲ್ಲಿ ಹೇಳಿರುವ ಮುಖ್ಯಗುಣಗಳು ಸಾಧಾರಣ ಮತ್ತು ವಿಶೇಷ ಧರ್ಮಗಳಾಗಿವೆ.

	ಇನ್ನು ಶಿಕ್ಷೆ ಅಥವಾ ದಂಡನೆಯ ವಿಚಾರ, ನೀತಿಶಾಸ್ತ್ರ ವ್ಯಕ್ತ ಹಾಗೂ ಸಮಾಜಕ್ಕೆ ಸಂಬಂಧಿಸಿದ್ದು. ವ್ಯಕ್ತಿ ಮತ್ತು ಸಮಾಜದ ನಡುವೆ ಶಾಂತಿಯನ್ನು ಕಾಪಾಡಲು ಅದು ಅನೇಕ ನೈತಿಕ ನಿಯಮಗಳನ್ನು ರೂಪಿಸಿದೆ. ಇಂಥ ನೈತಿಕ ನಿಯಮಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡಬೇಕೆ ಬೇಡವೆ? ಕೊಟ್ಟರೆ ಅದರ ಪ್ರಮಾಣ ಎಷ್ಟಿರಬೇಕು? ಈ ಮುಂತಾದ ವಿಷಯಗಳನ್ನು ನೀತಿಶಾಸ್ತ್ರ ಚರ್ಚಿಸುತ್ತದೆ.

	ದಂಡನೆಯ ಬಗ್ಗೆ ಮೂರು ಅಭಿಪ್ರಾಯಗಳಿವೆ: 1. ನಿವಾರಕವಾದ, 2. ನೀತಿ ಬೋಧಕವಾದ, 3. ಮುಯ್ಯಿಗೆ ಮುಯ್ಯಿ ವಾದ. 

	ನಿವಾರಕ ಅಥವಾ ಪ್ರತಿಬಂಧಕವಾದದ ಪ್ರಕಾರ, ಇತರರು ನೈತಿಕ ನಿಯಮಗಳನ್ನು ಉಲ್ಲಂಘಿಸದಿರಲು, ತಪ್ಪು ಮಾಡಿದ ಒಬ್ಬನನ್ನು ಶಿಕ್ಷಿಸಬೇಕು. ಅವನನ್ನು ನೋಡಿ ಇತರರು ನೀತಿವಂತರಾಗುವರು-ಎಂಬುದು ಈ ವಾದದ ತಿರುಳು.

	ನೀತಿಬೋಧಕವಾದದ ಪ್ರಕಾರ ಶಿಕ್ಷೆಯ ಗುರಿ ಆರೋಪಿಯನ್ನು ಹಿಂಸಿಸುವುದಲ್ಲ, ಆತನನ್ನು ಒಳ್ಳೆಯ ದಾರಿಗೆ ತರುವುದು ಮಾತ್ರ. ರೋಗ ಬಂದರೆ ಅದನ್ನು ವಾಸಿ ಮಾಡಲು ರೋಗಿಗೆ ಚಿಕಿತ್ಸೆ ಮಾಡಬೇಕೇ ಹೊರತು ಅವನನ್ನು ಕೊಲ್ಲಬಾರದು.

	ಮುಯ್ಯಿಗೆ ಮುಯ್ಯಿ ವಾದ ಅದರ ಹೆಸರೇ ಸೂಚಿಸುವಂತೆ ಒಬ್ಬ ಇನ್ನೊಬ್ಬನ ಕಣ್ಣನೊ ಕೈಯನ್ನೊ ಕಡಿದು ಹಾಕಿದರೆ ಆ ಕೃತ್ಯ ಮಾಡಿದವನ ಕೈ ಅಥವಾ ಕಣ್ಣನ್ನು ಕಡಿದುಹಾಕುವುದು ನ್ಯಾಯ.

	ಈ ಮೂರು ವಾದಗಳಲ್ಲಿ ನೀತಿಬೋಧಕವಾದವನ್ನು ಆಧುನಿಕ ನೀತಿಶಾಸ್ತ್ರಜ್ಞರು ಶಿಫಾರಸು ಮಾಡುತ್ತಾರೆ.

	ಭಾರತೀಯ ನೀತಿಶಾಸ್ತ್ರ: ಭಾರತೀಯ ನೀತಿಶಾಸ್ತ್ರ ಪಾಶ್ಚಾತ್ಯ ನೀತಿಶಾಸ್ತ್ರದಿಂದ ನಾಲ್ಕು ವಿಧಗಳಲ್ಲಿ ಭಿನ್ನ. 1. ಭಾರತೀಯ ನೀತಿಶಾಸ್ತ್ರ ಮುಖ್ಯವಾಗಿ ವ್ಯವಹಾರಧರ್ಮವುಳ್ಳದ್ದು. ಪಾಶ್ಚಾತ್ಯ ನೀತಿಶಾಸ್ತ್ರದಲ್ಲಿ ನೈತಿಕ ಭಾವನೆಗಳನ್ನು ಬಹಳ ವಿವರವಾಗಿ ಚರ್ಚಿಸಲಾಗಿದೆ. ಭಾರತೀಯ ತತ್ತ್ವಶಾಸ್ತ್ರದಲ್ಲಾದರೋ ಅಭ್ಯಾಸಿಗೂ ನೈತಿಕವಿಷಯಗಳು ಸಂಬಂಧಪಡುತ್ತವಾಗಿ ಆತನಿಗೆ ನೈತಿಕ ಭಾವನೆಯ ಅಷ್ಟೊಂದು ವಿವರವಾದ ಚರ್ಚೆ ಅನಾವಶ್ಯಕ ಎಂದು ವಿವರಗಳನ್ನು ಕೈಬಿಡಲಾಗಿದೆ. 2. ಭಾರತೀಯ ನೀತಿಶಾಸ್ತ್ರ ಧರ್ಮದೊಂದಿಗೆ ಮಿಳಿತಗೊಂಡಿದೆ. ನೀತಿ ಇಲ್ಲದ ಧರ್ಮ ಹಾಸ್ಯಾಸ್ಪದ, ಧರ್ಮವಿಲ್ಲದ ನೀತಿ ನಿಷ್ಪ್ರಯೋಜಕ ಎಂಬ ಭಾವನೆ ಭಾರತೀಯರಲ್ಲಿ ಬಹಳ ಕಾಲದಿಂದಲೂ ಇದೆ. 3. ಭಾರತೀಯ ನೀತಿಶಾಸ್ತ್ರಕ್ಕೆ ವೇದಗಳೇ ಆಧಾರ. ವೇದಗಳಲ್ಲಿ ಯಾವುದನ್ನು ಪ್ರತಿಷೇಧಿಸಿದೆಯೋ ಆ ಕಾರ್ಯಗಳನ್ನು ಮಾಡಬಾರದು. ಪೂರ್ವಮೀಮಾಂಸಕರು ಈ ವಾದವನ್ನು ಎತ್ತಿಹಿಡಿಯುತ್ತಾರೆ. 4. ಧರ್ಮ ಎನ್ನುವುದು ಭಾರತೀಯ ತತ್ತ್ವಶಾಸ್ತ್ರದ ಮೂಲ ಬೀಜ, ಮೂಲ ಸತ್ಯ. ಈ ಧರ್ಮ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ಧರ್ಮ ಎಂಬ ಪದ ಧೃ ಎಂಬ ಧಾತುವಿನಿಂದ ಬಂದಿದೆ. ಧೃ ಎಂದರೆ, ಪ್ರತಿಷ್ಠಾಪಿಸುವುದು, ಎತ್ತಿ ಹಿಡಿಯುವುದು, ಧಾರಣೆ ಮಾಡಿರುವುದು ಎಂದು ಅರ್ಥ. ಯಾವುದು ಈ ಜಗತ್ತಿಗೆಲ್ಲ ಪ್ರತಿಷ್ಠಾನವೋ, ಯಾವುದು ಸರ್ವರನ್ನೂ ರಕ್ಷಿಸುತ್ತದೆಯೋ ಅವೇ ಧರ್ಮ. ಧರ್ಮ ಎಂದರೆ ಆಶ್ರಮ ಧರ್ಮ, ಗುಣಧರ್ಮ, ಪಿತೃಧರ್ಮ, ವರ್ಣಧರ್ಮ, ವಿಶೇಷ ಧರ್ಮ ಇತ್ಯಾದಿ. ಧರ್ಮ ಒಟ್ಟಿನಲ್ಲಿ ಭಾರತೀಯ ನೀತಿಶಾಸ್ತ್ರದ ಅಡಿಗಲ್ಲು.

	ಜೈನಧರ್ಮ, ಬೌದ್ಧಧರ್ಮ, ಭಗವದ್ಗೀತೆ-ಇವುಗಳಲ್ಲಿ ನೀತಿಗೆ ದೊರಕಿರುವ ಸ್ಥಾನವನ್ನು ಸೂಕ್ಷ್ಮವಾಗಿ ನೋಡಬಹುದು. ಜೈನಧರ್ಮ ಮೂಲತಃ ಸಾಧನೀಯ ಧರ್ಮ. ಇಲ್ಲಿ ಆಧ್ಯಾತ್ಮಶಾಸ್ತ್ರಕ್ಕಿಂತ ವ್ಯಕ್ತಿಯ ಚಾರಿತ್ರ್ಯಕ್ಕೆ ಹೆಚ್ಚಿನ ಗಮನ ನೀಡಲಾಗಿದೆ. ಈ ಮಾತು ಬೌದ್ಧ ಧರ್ಮಕ್ಕೂ ಅನ್ವಯಿಸುತ್ತದೆ. ಜೈನಧರ್ಮದಲ್ಲಿ ಮಾನವನ ಗುರಿ ಕೈವಲ್ಯವನ್ನು ಪಡೆಯುವುದಾಗಿದೆ. ಈ ಗುರಿಯನ್ನು ಸಾಧಿಸಲು ತ್ರಿರತ್ನಗಳೆಂಬ ಮಾರ್ಗವನ್ನು ಪ್ರತಿಪಾದಿಸಲಾಗಿದೆ. 1. ಸಂಯಕ್ ದರ್ಶನ-ಜೈನ ಧರ್ಮದ ತತ್ತ್ವಗಳಲ್ಲಿ ನಂಬಿಕೆ ಇಡುವುದು. 2. ಸಂಯಕ್ ಜ್ಞಾನ- ಜೈನ ಧರ್ಮ ಮತ್ತು ದರ್ಶನದ ಸಮಗ್ರ ತಿಳಿವಳಿಕೆ. 3. ಸಂಯಕ್ ಚಾರಿತ್ರ್ಯ- ಜೈನ ಧರ್ಮ ಬೋಧಿಸಿದ ತತ್ತ್ವಗಳನ್ನು ನಿತ್ಯಜೀವನದಲ್ಲಿ ಅಳವಡಿಸುವುದು.

	ಇದೇ ರೀತಿ ಬೌದ್ಧ ಧರ್ಮದಲ್ಲಿ ಸಾಧನೆಯ ಎಂಟು ಹಂತಗಳನ್ನು ಹೇಳಿದೆ. ಈ ಮಾರ್ಗವನ್ನು ಆರ್ಯ ಅಷ್ಟಾಂಗಿಕ ಮಾರ್ಗ ಎಂದು ಕರೆಯುವರು; 1. ಸಂಯಕ್ ದೃಷ್ಟಿ-ಬೌದ್ಧ ಧರ್ಮದ ನಾಲ್ಕು ಆರ್ಯಸತ್ಯಗಳಲ್ಲಿ ನಂಬಿಕೆ ಇಡುವುದು. 2. ಸಂಯಕ್ ಸಂಕಲ್ಪ-ಬೌದ್ಧ ಧರ್ಮದ ಬೋಧನೆಗಳನ್ನು ನಿತ್ಯ ಜೀವನದಲ್ಲಿ ತರುವುದು. 3. ಸಂಯಕ್ ವಾಕ್-ಒಳ್ಳೆಯ ಮಾತು. 4. ಸಂಯಕ್ ಕರ್ಮ-ಕೊಲ್ಲದಿರುವುದು, ಕದಿಯದಿರುವುದು ಮುಂತಾಗಿ. 5. ಸಂಯಕ್ ಜೀವನ-ಸರಿಯಾದ ಮಾರ್ಗದಿಂದ ಜೀವನವನ್ನು ನಡೆಸುವುದು. 6. ಸಂಯಕ್ ವ್ಯಾಯಾಮ-ಕೆಟ್ಟ ಯೋಚನೆ, ಭಾವನೆಗಳನ್ನು ಮನಸ್ಸಿನಿಂದ ದೂರಿಕರಿಸುವುದು. 7. ಸಂಯಕ್ ಸ್ಮøತಿ-ಸುಖದುಃಖಗಳು ಹಾಗೂ ಶರೀರಗಳ ಲೋಪದೋಷಗಳನ್ನು ಮನದಲ್ಲಿಟ್ಟುಕೊಂಡು ಅವನ್ನು ಕ್ರಮೇಣ ಸರಿಪಡಿಸುತ್ತ ಬರುವುದು. 8. ಸಂಯಕ್ ಸಮಾಧಿ-ಇದು ಅಂತಿಮ ಸೋಪಾನ. ಈ ಸ್ಥಿತಿಯಲ್ಲಿ ನಿರಂತರ ಶಾಂತಿ ನೆಲೆಗೊಂಡು ಭಕ್ತ ಅಮಿತಾನಂದದಲ್ಲಿ ಮುಳುಗುತ್ತಾನೆ.

	ಹಿಂದೂ ಧರ್ಮದ ಗುರಿ ಮೋಕ್ಷವನ್ನು ಪಡೆಯುವುದಾಗಿದೆ. ಇದನ್ನೇ ಆತ್ಮ ಸಾಕ್ಷಾತ್ಕಾರ ಎಂದೂ ಕರೆಯುವರು. ಆತ್ಮಸಾಕ್ಷಾತ್ಕಾರಕ್ಕೆ ನೀತಿ ಮುಖ್ಯವಷ್ಟೇ ಅಲ್ಲ ಅನಿವಾರ್ಯವೂ ಕೂಡ. ಹಿಂದೂ ಧರ್ಮದ ಕೈಪಿಡಿಯಂತಿರುವ ಭಗವದ್ಗೀತೆಯಲ್ಲಿ ಗುರಿಯನ್ನು ಮುಟ್ಟಲು ಮುಖ್ಯವಾಗಿ ನಾಲ್ಕು ಮಾರ್ಗಗಳನ್ನು (ಯೋಗ) ಹೇಳಿದೆ; 1. ಜ್ಞಾನಯೋಗ-ಇದು ತತ್ತ್ವಜ್ಞಾನಿಗೆ ತಕ್ಕದ್ದಾಗಿದೆ. ಅಜ್ಞಾನದಿಂದ ಮಾನವ ತಾನು ಅಲ್ಪಜ್ಞನೆಂದು ತಿಳಿದು ಹುಟ್ಟುಸಾವುಗಳ ಸಾಗರದಲ್ಲಿ ತೊಳಲಾಡುತ್ತಿದ್ದಾನೆ. ಜ್ಞಾನವೊಂದೇ ಈ ಅಜ್ಞಾನವನ್ನು ಹೋಗಲಾಡಿಸುವುದು. 2. ಕರ್ಮಯೋಗ-ಇದು ಎಲ್ಲ ಸಾಮನ್ಯರಿಗೂ ತಕ್ಕುದಾಗಿದೆ. ಯಾವ ಆಸೆ ಆಮಿಷಗಳನ್ನೂ ಇಟ್ಟುಕೊಳ್ಳದೇ ನಿರಾಸಕ್ತಿಗಳಿಂದ ತನ್ನ ಪಾಳಿನ ಕೆಲಸಗಳನ್ನು ಮಾಡುವುದೇ ಈ ಯೋಗದ ಗುಟ್ಟು. 3. ರಾಜಯೋಗ-ಇದು ಯೋಗಿಗಳಿಗೆ ತಕ್ಕುದ್ದಾಗಿದೆ. ಮನಸ್ಸನ್ನು ನಾನಾ ವಿಧದಿಂದ ನಿಯಂತ್ರಿಸಿ, ಅದರ ಛಿದ್ರಕಾರಿ ಶಕ್ತಿಯನ್ನು ನಿಷ್ಪಲಗೊಳಿಸಿ, ಅಂತಿಮಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂದು ಈ ಯೋಗ ಬೋಧಿಸುತ್ತದೆ. 4. ಭಕ್ತಿಯೋಗ-ಇದು ಸುಲಭವಾದರೂ ಇದನ್ನು ಅಳವಡಿಸಲು ವಿಶಾಲಶ್ರದ್ಧೆ ಮನೋಧರ್ಮಗಳು ಅವಶ್ಯಕ. ಇದು ಭಾವನಾಜೀವಿಗಳಿಗೆ ತಕ್ಕಂಥದು. ಭಗವಂತ ಒಡೆಯ ಮಾನವ ಸೇವಕ, ಈ ಶೇಷಿ ಶೇಷ ಸಂಬಂಧವನ್ನು ಅರಿತು ಆತನ ಇಚ್ಛೆಗನುಸಾರವಾಗಿ ನಡೆದುಕೊಂಡರೆ, ಒಂದಲ್ಲ ಒಂದು ದಿನ ಈ ಸಂಸಾರ ಸಾಗರದಿಂದ ಮುಕ್ತಿ ದೊರಕುತ್ತದೆಂದು ಭಕ್ತರು  ನಂಬುತ್ತಾರೆ.					(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ